O Manase
ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ ಇದು ಪತ್ರ ಸಂಚಿಕೆ, ಮಿತ್ರರ ಸಂಚಿಕೆಯೂ ಹೌದು. ಮಿತ್ರರು ತಮ್ಮ ಮೈತ್ರಿಯ ಬಗ್ಗೆ ಪತ್ರಗಳನ್ನು ಬರೆದಿದ್ದಾರೆ, ಜೀವದ ಗೆಳೆಯರ ಜೊತೆ ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಆ ಕಾರಣಕ್ಕೆ ‘ಓ ಮನಸೇ..’ ಯ 96ನೇ ಸಂಚಿಕೆ ವಿಶೇಷ ಮತ್ತು ವಿಶಿಷ್ಟ. ಬರೀ ಪತ್ರಗಳಷ್ಟೇ ಅಲ್ಲ, ಈ ಸಂಚಿಕೆಯಲ್ಲಿರುವ ಪ್ರತಿಯೊಂದು ಬರಹವೂ ಸ್ನೇಹಕ್ಕೆ ಸಂಬಂಧಿಸಿದ್ದೇ. ಅಂಥಾ ಲೇಖನಗಳ ಕೆಲವೊಂದು ಸ್ಯಾಂಪಲ್ಲುಗಳು ಇಲ್ಲಿವೆಃ ತೆರೆಯ ಮೇಲೆ ಕುಚಿಕೂ ಕುಚಿಕೂ ಎಂದು ಅಪ್ಪಿಕೊಂಡು ಕುಣಿದಾಡುವ ಗೆಳೆಯರು ನಿಜಜೀವನದಲ್ಲಿ ಹೇಗಿರುತ್ತಾರೆ ಅನ್ನುವುದನ್ನು ‘ಬೆಳ್ಳಿತೆರೆಯ ಆಪ್ತಮಿತ್ರರು’ ಲೇಖನದಲ್ಲಿ ಚೇತು ಪತ್ತೆ ಹಚ್ಚಿದ್ದಾರೆ. ಈ ಕಾಲದಲ್ಲಿ ಸ್ನೇಹಕ್ಕಿರುವ ಬಲುದೊಡ್ಡ ಸೇತುವೆಯೆಂದರೆ ಫೇಸ್ ಬುಕ್. ಆದರೆ ನಿಮ್ಮ ಅಕೌಂಟಲ್ಲಿರುವ ಸ್ನೇಹಿತರು ಬರೀ ಲೈಕ್ ಸಂಖ್ಯೆ ಹೆಚ್ಚಿಸಲು ಮಾತ್ರ ಲಾಯಕ್ಕಾ? ಫೇಸ್ ಬುಕ್ಕಲ್ಲಿರುವ ಗೆಳೆಯರು ಮನಸ್ಸೊಳಗೂ ಬರುತ್ತಾರಾ ಎಂಬ ಅನುಮಾನವನ್ನು ವ್ಯಕ್ತಪಡಿಸುತ್ತಾರೆ ನೇವಿ. ಬೆಸ್ಟ್ ಫ್ರೆಂಡ್ ಅನ್ನೋನು ದೇವರಂತೆ, ಎಲ್ಲೋ ಇದ್ದಾನೆ ಅನ್ನೋ ನಂಬಿಕೆ ಮತ್ತು ಖಾತ್ರಿಯಲ್ಲೇ ಸ್ನೇಹದ ತಂತುವೊಂದು ಉಳಿದಿರುತ್ತದೆ. ಹಾಗಾದರೆ ‘ನಿಮ್ಮ ಗೆಳೆಯ ಯಾರು’ ಎಂದು ಸವಾಲು ಹಾಕುತ್ತಾರೆ ಜಾನಕಿ. ಬೆಂಗಳೂರಲ್ಲಿ ಊರು ಬಿಟ್ಟು ಬಂದವರ ಫ್ರೆಂಡ್ಸ್ ಕ್ಲಬ್ಬುಗಳಿವೆ, ಗೊತ್ತಾ ನಿಮಗೆ? ಅದರ ಬಗ್ಗೆ ವಿವರವಾಗಿ ಬರೆಯುತ್ತಾರೆ ಮಹಾಶ್ವೇತ. ಆರು ವರ್ಷದ ತುಂಟ ಹುಡುಗ ಮತ್ತು ಹುಲಿಯ ಜೊತೆಗಿನ ಆತನ ಸಂಬಂಧದ ಬಗ್ಗೆ ‘ಬಂದನಾ ಹುಲಿರಾಯನು’ ಎಂಬ ರೋಚಕ ಸತ್ಯಕತೆ ಬರೆದಿದ್ದಾರೆ ರೋಹಿತ್ ಚಕ್ರತೀರ್ಥ. ಇದರ ಜೊತೆಗೆ ಸಂಚಿಕೆಯ ಹತ್ತುಪುಟಗಳು ತಮ್ಮ ಗೆಳೆಯರ ಬಗ್ಗೆ ಓದುಗರು ಬರೆದ ಪತ್ರಗಳಿಗೆ ಮೀಸಲಾಗಿವೆ. ಕಣ್ಣೀರ ಒಡತಿ ಶ್ರುತಿ ತನಗಿಷ್ಟವಾದ ಶ್ರುತಿ ಚಿತ್ರದ ಬಗ್ಗೆ ಹೇಳುತ್ತಾ ತಮ್ಮ ಬದುಕಿನ ಕೆಲವು ಪುಟಗಳನ್ನು ತೆರೆದಿಟ್ಟಿದ್ದಾರೆ. ಇದು ಫ್ರೆಂಡ್ಸ್ ಡೇ ಬಗ್ಗೆ ನಾವು ರೂಪಿಸಿರುವ ವಿಶೇಷ ಸಂಚಿಕೆ. ಎಲ್ಲಾ ಗೆಳೆಯ ಗೆಳತಿಯರು ಓದಲೇ ಬೇಕಾದ ಸಂಚಿಕೆ ಕೂಡಾ
No comments:
Post a Comment